ನೀನು ನೀನಾಗಿರು!

೨೫೦೦ ವರ್ಷಗಳ ಹಿಂದೆ, ಬುದ್ಧನಿದ್ದ ಕಾಲದಲ್ಲಿ ನಡೆದ ಕಥೆಯಿದು. 
 “ಮಹಾಪ್ರಭು! ಮಹಾಪ್ರಭು!” ಎಂದು ಚೀರುತ್ತ, ಭಯಭೀತರಾದ ಭಟರು ರಾಜನಲ್ಲಿಗೆ ಬಂದರು. ಅವರ ಅಳುಕಿದ ಧ್ವನಿಯಲ್ಲೇ ಪರಿಸ್ಥಿತಿಯ ಗಾಂಭೀರ್ಯತೆಯನ್ನರಿತ ಮಹಾರಾಜ ಗುಡುಗಿದನು “ಏನಾಯ್ತು? ಏಕಿಷ್ಟು ಅಂಜಿಕೆ?!”. ನಡುಗುತಿದ್ದ ಸೈನಿಕರೊಲ್ಲೊಬ್ಬ ಸತ್ಯ ತೊದಲತೊಡಗಿದನು “ಅದು.. ಪ್ರಭು… ಸಿಂಹವನ್ನು ಬೇಟೆಯಾಡುಲು ಹೋಗಿದ್ದ ಯುವರಾಜರ ಮೇಲೆ,ಸಿಂಹ ಪ್ರತಿದಾಳಿ ನಡೆಸಿದೆ. ಯುವರಾಜರ ಸ್ಥಿತಿ ಚಿಂತಾಜನಕವಾಗಿದೆ!”. ಮಗನ ಸ್ಥಿತಿ ಕೇಳಿದ ರಾಜ ರೊಚ್ಚಿಗೆದ್ದು “ಹೇಡಿಗಳೇ! ನನ್ನ ಮಗನ ರಕ್ಷಣೆ ಮಾಡಲಾಗದ ನಿಮ್ಮ ಪ್ರಾಣ ಪಕ್ಷಿ ಹಾರಿಸುತ್ತೇನೆ!” ಎಂದು ಘರ್ಜಿಸಿ,ಅವರ ಈಟಿಯಿಂದ ಅವರೆದೆಯನ್ನೇ ಸೀಳಿದನು. ಪ್ರತಿಶೋಧದ ಜ್ವಾಲೆಯಲ್ಲಿ ಉರಿಯುತ್ತಿದ್ದ ರಾಜ ಆರ್ಭಟಿಸಿದ “ಕಾಡಾಗಲಿ! ನಾಡಾಗಲಿ! ಈ ಪ್ರತಾಪಸಿಂಹನೇ ಅದರ ರಾಜ! ಆ ಸೊಕ್ಕಿದ ಸಿಂಹವನ್ನು ಇಂದೇ ಮುಗಿಸುವೆ! ಚರ್ಮವ ಸೀಳಿ ನನ್ನ ಮಗನಿಗೆ ಹೊದಿಕೆ ಹೊಲಿಸುವೆ… ಮಹಾಮಂತ್ರಿಗಳೇ! ನನ್ನ ಮಗನ ಚಿಕಿತ್ಸೆಗೆ ವೈದ್ಯರನ್ನು ಕೂಡಲೇ ಕರೆಯಿರಿ. ಸೈನ್ಯಾಧಿಪತಿ! ಕಾಡಿಗೆ ಈ ಕ್ಷಣವೆ ಲಗ್ಗೆಯಿಡಲು ಸಿದ್ಧರಾಗಿ!”
lion
Being Yourself is the toughest thing!

[ Licensed under CC – By Edge Earth @ Flickr ]

ರಾಜ ಪ್ರತಾಪಸಿಂಹ ಸೈನ್ಯದೊಡನೆ ಕಾಡಿನೆಡೆಗೆ ಧಾವಿಸತೊಡಗಿದ. ಸೈನಿಕರು ಬೆಂಕಿ ಹಚ್ಚಿ ಮರಗಳನ್ನೆಲ್ಲ ದ್ವಂಸ ಮಾಡಲಾರಂಭಿಸಿದರು. ಹೆದರಿದ ವನ್ಯಮೃಗಗಳು ದಿಕ್ಕಾಪಾಲಾಗಿ ಪ್ರಾಣ ಭೀತಿಯಿಂದ ಓಡತೊಡಗಿದವು. ಇಡೀ  ಕಾಡೇ ಯುದ್ಧಭೂಮಿಯಾಯಿತು. 
 
ಪ್ರತಾಪಸಿಂಹ ಕೊಲ್ಲಲು ಹೊರಟಿದ್ದು ಕಾಡಿನ ರಾಜ ಸಮರಸಿಂಹನನ್ನು! ಸಮರಸಿಂಹ ವೀರರಲ್ಲಿ ವೀರ, ರಣಧೀರ! ಆತನಿಗೆ ಸಾಹಸಸಿಂಹನೆಂಬ ಒಂದು ಪುಟ್ಟ ಗಂಡು ಸಿಂಹದಮರಿಯಿತ್ತು. ತಾಯಿಯನ್ನು ಕಳೆದುಕೊಂಡಿದ್ದ ತನ್ನ ಮಗನನ್ನು ಕಂಡರೆ ಸಮರಸಿಂಹನಿಗೆ ಅಪಾರ ಪ್ರೀತಿ. ತನ್ನ ಪರಾಕ್ರಮವನ್ನೆಲ್ಲ ಮಗನಿಗೆ ಧಾರೆಯೆರೆದು, ಭವಿಷ್ಯದಲ್ಲಿ ಅವನೂ ತನ್ನಂತೆಯೇ ಕಾಡಿನ ಅರಸನಾಗಬೇಕೆಂಬ ಆಸೆ. ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. 
 
ಧಾವಿಸಿ ಬರುತಿದ್ದ ಸೈನಿಕರ ಗದ್ದಲ ಕೇಳಿ, ಅಪಾಯದ ಅರಿವಾಗಿ, ಸಮರಸಿಂಹ ತನ್ನ ಮರಿಯನ್ನು ತಾನಿದ್ದ ಗುಹೆಯ ಅಂತಃಪಾರ್ಶ್ವದಲ್ಲಿ ಮರೆಮಾಡಿ ಇರಿಸಿದ. ಸೈನಿಕರು ಗುಹೆಯತ್ತ ಬರುತ್ತಿದ್ದಂತೆಯೇ ಅವರ ಮೇಲೆ ಎರಗಿದ ಸಮರಸಿಂಹ, ಹತ್ತಾರು ಸೈನಿಕರನ್ನು ಯಮಲೋಕಕ್ಕೆ ಕಳುಹಿಸಿದ. ವೀರಾವೇಶದಿಂದ ಹೋರಾಡಿದ. ಕಡೆಗೆ, ಪ್ರತಾಪಸಿಂಹನು ಆಸೀನನಾಗಿದ್ದ ಗಜದ ಮೇಲೆಯೆ ಚಿಮ್ಮಿದ. ಆದರೆ ರಾಜನಿಗೆ ರಕ್ಷಣೆಯ ಕೊರತೆಯೇನು ಇರಲಿಲ್ಲ. ನೂರಾರು ಸೈನಿಕರು ಒಮ್ಮೆಲೆ ಸಮರಸಿಂಹನ ಮೇಲೆ ಬಿದ್ದರು. ನಡೆದ ಕಾಳಗದಲ್ಲಿ ಸಮರಸಿಂಹ ಶಸ್ತ್ರಾಸ್ತ್ರ ದಾಳಿಗೆ ಬಲಿಯಾದನು. ಸಿಂಹವನ್ನು ಸನಿಹದಿಂದ ಕಂಡು ಗಾಬರಿಗೊಂಡಿದ್ದ ರಾಜ, ಸಿಂಹದ ಸಾವನ್ನು ತಿಳಿದು ಎದೆ ತಟ್ಟಿ ಉನ್ಮತ್ತನಾದನವನಂತೆ ಗಹಗಹಿಸಿದನು. “ಪ್ರತಾಪಸಿಂಹನಿಗೆ ಜಯವಾಗಲಿ! ಪ್ರತಾಪಸಿಂಹನಿಗೆ ಜಯವಾಗಲಿ!”  ಎಂದು ಜಯಘೋಷ ಹಾಕುತ್ತ ರಾಜನ ಪಾಳಯ ನಾಡಿಗೆ ಹಿಂದಿರುಗಿತು. 
 
ಕಾಡಿನಲ್ಲಿ ನಡೆದ ಮಾರಣಹೋಮದ ಸುದ್ದಿ ಸಮೀಪದಲ್ಲಿದ್ದ ಬುದ್ಧನ ಆಶ್ರಮಕ್ಕೆ ತಲುಪಿತು. ಪ್ರಾಣಿಗಳ ರೋಧನೆ ಕೇಳಲಾಗದ ಬುದ್ಧ, ಅವುಗಳ ನೋವನ್ನು ತಗ್ಗಿಸಲು ಗಿಡಮೂಲಿಕೆಗಳನ್ನು ಹೊತ್ತು ಶಿಷ್ಯರೊಂದಿಗೆ ಕಾಡಿನೊಳಗೆ ಪ್ರಯಾಣ ಬೆಳೆಸಿದ. ಗುಹೆಯಲ್ಲಿ ಅಡಗಿದ್ದ ಸಮರಸಿಂಹನ ಮರಿ ಅಪ್ಪನನ್ನು ಹುಡುಕುತ್ತ ಆಚೆಗೆ ಬಂದಿತು. ಅಪ್ಪನ ಕಾಣದೆ ಕಂಗಾಲಾಗಿ ಅಳತೊಡಗಿತು. ಸಿಂಹದಮರಿಯ ಆಕ್ರಂದನ ಬುದ್ಧನ ಗುಂಪಿಗೆ ಕೇಳಿಬಂತು. ಶಿಷ್ಯನೊಬ್ಬ ಮರಿಯನ್ನು ಎತ್ತಿಕೊಂಡು-“ಗುರುವರ್ಯ! ಈ ಮರಿಗೆ ಶಾರೀರಿಕವಾಗಂತೂ ಪೆಟ್ಟಾಗಿಲ್ಲ. ಇದರ ಅಳಲನ್ನು ನೋಡಿದರೆ,ಅಪ್ಪ ಅಮ್ಮನಿಂದ ದೂರವಾಗಿರುವ ಹಾಗೆ ಭಾಸವಾಗುತ್ತಿದೆ” ಎಂದನು. ಮತ್ತೊಬ್ಬ ಶಿಷ್ಯ ಗಾಬರಿಯಿಂದ “ಅಯ್ಯೋ ಶಿವನೇ! ಆ ಸಿಂಹಮರಿಯನ್ನು ದೂರ ತಳ್ಳು. ಅದರ ಅಪ್ಪ-ಅಮ್ಮನಿಗೆ ತಿಳಿದರೆ ನಮ್ಮೆಲ್ಲರನ್ನು ತಿಂದಿಹಾಕುತ್ತವೆ. ಇಲ್ಲಿಂದ ಬೇಗ ಪಲಾಯನ ಮಾಡುವುದೇ ಒಳಿತು.” ಎಂದು ಕಿರುಚಿದನು. “ತಾಳ್ಮೆ!” ಎಂದು ಬುದ್ಧ, ಶಿಷ್ಯರಿಗೆ ಶಾಂತವಾಗಲು ಆದೇಶಿಸಿದ. ತನ್ನ ದಿವ್ಯದೃಷ್ಟಿಯಿಂದ ಕಾಡಿನಲ್ಲಿ ನಡೆದ ಸಂಗತಿಯನ್ನೆಲ್ಲಾ ಅರಿತನು. ಸಿಂಹದಮರಿಯ ಮೇಲೆ ಬುದ್ಧನಿಗೆ ಕನಿಕರವಾಯಿತು. ಶಿಷ್ಯರ ಸಂಬೋಧಿಸಿ “ಈ ಸಿಂಹದಮರಿಯ ಹೆಸರು ಸಾಹಸಸಿಂಹ. ಇದು ಅನಾಥವಾಗಿದೆ. ಸಧ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ನಮ್ಮ ಆರೈಕೆ ಮತ್ತು ರಕ್ಷಣೆಯ ಅವಶ್ಯಕತೆಯಿದೆ. ಆಶ್ರಮಕ್ಕೆ ಕರೆತನ್ನಿ.” ಎಂದ. ಭಯಭೀತನಾಗಿದ್ದ ಶಿಷ್ಯ ಹೆಚ್ಚು ಮಾತನಾಡಿದರೆ ಗುರುಗಳ ಕೋಪಕ್ಕೆ ತುತ್ತಾಗಬೇಕಾದೀತೆಂದು ಮೌನ ವಹಿಸಿದ. ಸಿಂಹದಮರಿಯನ್ನು ಹೊತ್ತು ಬುದ್ಧನ ಬಳಗ ಆಶ್ರಮಕ್ಕೆ ಹೊರಟಿತು. 
 
ಸಾಹಸಸಿಂಹನಿಗೆ ಆಶ್ರಮದ ವಾತಾವರಣ ಸಂಪೂರ್ಣ ಹೊಸತು. ಎಲ್ಲಿ ನೋಡಿದರು ಗಂಟೆಗಳ ನಾದ, ಋಷಿಗಳ ಶ್ಲೋಕ ಪಠಣ. ಸಿಂಹಗಳೊಡನೆ ಬೆಳೆದ ಅದಕ್ಕೆ ಆಶ್ರಮದಲ್ಲಿದ್ದ ಜಿಂಕೆ, ಮೊಲ, ಆನೆಗಳು ವಿಭಿನ್ನವಾಗಿ ಕಂಡವು. ಅನ್ಯ ಪ್ರಾಣಿಗಳಿಗೆ ಸಾಹಸಸಿಂಹನನ್ನು ಕಂಡರೆ ಏನೋ ಭೀತಿ, ತಳಮಳ. ಆದರೆ ಸಾಹಸಸಿಂಹನ ಮನಸ್ಸು ಮುಗ್ಧತೆಯ ಪ್ರತೀಕವಾಗಿತ್ತು. ತನ್ನ ಮುದ್ದಾದ ಮೊಗ, ತುಂಟು ವರ್ತನೆಯಿಂದ ಆಶ್ರಮದ ನಿವಾಸಿಗಳೆಲ್ಲರ ಹೃದಯ ಗೆದ್ದನು. ಕಾಲ ಕ್ರಮೇಣ ಆಶ್ರಮ ಪ್ರಾಣಿಗಳು ತಮ್ಮ ಭಯವ ಬಿಟ್ಟು ಸಾಹಸಸಿಂಹನ ಜೊತೆ ಗೆಳೆತನ ಬೆಳೆಸಿದವು.
ಹೀಗೆ ವರ್ಷಗಳು ಉರುಳಿದವು. ಸಾಹಸಸಿಂಹ ಆಶ್ರಮದ ಅವಿಭಾಜ್ಯ ಅಂಗವಾದನು.
 
ಕಾಲ ಕಳೆದಂತೆ ಸಾಹಸಸಿಂಹ ಮರಿಯಿಂದ ಒಂದು ಬಲಿಷ್ಠ, ದಷ್ಟ-ಪುಷ್ಟ ಸಿಂಹವಾಗಿ ಮಾರ್ಪಾಡಾದನು. ಆದರೆ ಆಶ್ರಮ ವಾತಾವರಣದಲ್ಲಿ ಬೆಳೆದ ಅವನ ನಡೆ-ನುಡಿಗಳೆಲ್ಲಾ ಅಲ್ಲಿದ್ದ ಸಾಕು ಪ್ರಾಣಿಗಳಂತಿತ್ತು. ಸಾತ್ವಿಕ ಆಹಾರ ಸೇವನೆ ಮಾಡಿಕೊಂಡು, ಜಿಂಕೆ-ಮೊಲಗಳ ಜೊತೆ ಕಣ್ಣ ಮುಚ್ಚಾಲೆ ಆಡಿಕೊಂಡಿದ್ದನು. ಸಿಂಹಗಳಂತೆ ಬೇಟೆ ಇರಲಿ, ಒಂದು ದಿನವೂ ಗಟ್ಟಿ ದನಿಯಲ್ಲಿ ಘರ್ಜಿಸಿರಲಿಲ್ಲ. ಇದರಿಂದ ಬುದ್ಧನಿಗೆ ತಳಮಳವಾಯಿತು. ಸಾಹಸಸಿಂಹ ಇನ್ನು ಆಶ್ರಮದಲ್ಲಿರುವುದು ಒಳಿತಲ್ಲವೆಂದು ನಿರ್ಧರಿಸಿ ಅವನನ್ನು ಕರೆದು ಬುದ್ಧಿಮಾತು ಹೇಳಿದನು “ಸಾಹಸಸಿಂಹ! ನೀನೀಗ ಒಂದು ಶಕ್ತಿಶಾಲಿ, ಪ್ರಾಯದ ಸಿಂಹ. ನೀನು ಆಶ್ರಮದಲ್ಲಿ ಸಾತ್ವಿಕ ಜೀವನ ನಡೆಸಿಕೊಂಡಿರುವುದು ತರವಲ್ಲ. ನಮ್ಮ ಆಶ್ರಮಕ್ಕೆ ಬಂದ ಪುಟ್ಟ ಮರಿಯಲ್ಲ. ನಿನಗೆ ರಕ್ಷಣೆಯ ಅವಶ್ಯಕತೆ ಈಗಿಲ್ಲ. ಹೇಳುವುದಾದರೆ ಕಾಡಿನ ಪ್ರಾಣಿಗಳಿಗೆ ನಿನ್ನಂತ ರಾಜನ ಸಂರಕ್ಷಣೆ ಬೇಕಿದೆ. .ಕಾಡಿಗೆ ಹಿಂದಿರುಗು! ಕರ್ತವ್ಯ ಪಾಲನೆ ಮಾಡು!”. ಬುದ್ಧನಿಂದ ಈ ಮಾತುಗಳನ್ನು ಕೇಳಿ ಸಾಹಸಸಿಂಹನಿಗೆ ಒಬ್ಬ ಅಪ್ಪ ಮಗನನ್ನು ಮನೆಯಿಂದಾಚೆ ಅಟ್ಟಿದಂತಾಯಿತು. ಕಣ್ಣೀರು ಸುರಿಸುತ್ತಾ ಹೀಗೆ ನುಡಿದನು “ಗುರುಶ್ರೇಷ್ಠರೇ! ಈ ಆಶ್ರಮವೇ ನನ್ನ ಮನೆ, ನನ್ನ ಸರ್ವಸ್ವ. ಇಲ್ಲಿರುವವರೇ ನನ್ನ ಬಂಧು-ಬಳಗ. ಇವರನ್ನಗಲಿ ನಾನೆಲ್ಲು ಹೋಗಲಾರೆ!”. ಬುದ್ಧ ಸಮಾಧಾನದಿಂದಲೇ ಪ್ರತ್ಯುತ್ತರನಿತ್ತ  “ಭಾವನೆಗಳ ಬಂಧನದಲ್ಲಿ ಸಿಲುಕಬೇಡ! ನಿನ್ನ ದುಃಖ ನನಗೆ ತಿಳಿಯುತ್ತದೆ. ಆದರೆ ನಿನ್ನ ಉದ್ಧಾರ ಈ ಆಶ್ರಮದಿಂದಾಚೆಯೇ ಸಾಧ್ಯ. ಎಂದೆಂದಿಗೂ ನೀನು ನಮ್ಮ ಮನಸಿನ್ನಲ್ಲಿ ನೆಲೆಸಿರುವೆ. ಹೋಗಿ ಬಾ ಮಗನೇ!”
 
ಬುದ್ಧನ ಈ “ಕಟು” ನಿರ್ಧಾರ ಅರಿತ ಶಿಷ್ಯರು, ಸಾಹಸಸಿಂಹನ ಮೇಲಿದ್ದ ಅಪಾರ ಪ್ರೀತಿಯಿಂದಾಗಿ ಗುರುಗಳ ಈ “ತಪ್ಪು” ನಿಲುವಿನ ವಿರುದ್ಧ ಹೋರಾಡಿದರು!  ಮೇಲ್ನೋಟದಲ್ಲಿ ಕಾಣಿಸದಿದ್ದರೂ ಬುದ್ಧನಿಗೆ ಸಾಹಸಸಿಂಹನ ಮೇಲೆ ಅವರಿಗಿಂತಲೂ ಹೆಚ್ಚು ಪ್ರೀತಿ. ಅವನ ಭವಿಷ್ಯಕ್ಕಾಗಿಯೇ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದನು. ಕಡೆಗೂ ಇಡೀ ಆಶ್ರಮ ಗುರುಗಳ ಮಾತನ್ನೇ ಕೇಳಬೇಕಾಯಿತು. ಆಶ್ರುತಪ್ತರಾಗಿ ಆಶ್ರಮದವರೆಲ್ಲರೂ ಸಾಹಸಸಿಂಹನನ್ನು ಬೀಳ್ಕೊಟ್ಟರು.
 
ಕಾಡಿನಲ್ಲಿ ಸಮರಸಿಂಹನ ಸಾವಿನ ನಂತರ, ಕಾಡಿನ ರಾಜಗದ್ದುಗೆಗೆ ವಾರಸುದಾರರಿಲ್ಲದೆ ಅವ್ಯವಸ್ಥೆ ಸೃಷ್ಟಿಯಾಗಿತ್ತು. ಸಮರಸಿಂಹನ ಸೋದರರು ಸಿಂಹಾಸನಕ್ಕಾಗಿ ಕಚ್ಚಾಡುತ್ತಿದ್ದರು. ಜೊತೆಗೆ, ನಾಡಿನ ಕ್ರೂರರಾಜ ಪ್ರತಾಪಸಿಂಹನ ಸೈನ್ಯೆ ಆಗಾಗ ಕಾಡಿನಲ್ಲಿ ಬಿಡಾರ ಹೂಡಿ, ಸೋಮರಸ ಸೇವಿಸಿ ಧಾಂದಲೆ ಮಾಡುತಿತ್ತು. ಇಷ್ಟೆಲ್ಲ ಆದರೂ ಕಾಡಿನ ಪರಿಸ್ತಿತಿಯನ್ನು ಸ್ವಲ್ಪವಾದರೂ ಹತೋಟಿಯಲ್ಲಿ ಇಟ್ಟಿದ್ದು ಕಾಡಿನ ಹಿರಿಯ ಕರಡಿ ಜಾಂಬವಂತ. ಒಂದಾನೊಂದು ಕಾಲದಲ್ಲಿ ಜಾಂಬವಂತ ಎಷ್ಟು ಪರಾಕ್ರಮಿಯಾಗಿದ್ದನೆಂದರೆ “ಅಜಾತಶತ್ರು” ಎಂಬ ಹೆಸರಿನಿಂದಲೇ ಪ್ರಖ್ಯಾತಿಯಾಗಿದ್ದನು. ಸಮರಸಿಂಹನಿಗು ಇವನೇ ಚಿಕ್ಕಂದಿನಿಂದಲೂ ಗುರು. ಆದರೆ ಮುಪ್ಪು ಬಂದು ಬೇಟೆಯಾಡುವ ಕ್ಷಮತೆ ಕಮ್ಮಿಯಾಗಿತ್ತು. ಆದರೂ ಜಾಂಬವಂತನನ್ನು ಕಂಡರೆ ಕಾಡಿನಲ್ಲಿ ಎಲ್ಲರಿಗೂ ಅತ್ಯಂತ ಗೌರವ, ಅಪಾರ ನಂಬಿಕೆ.ಇವನಿಲ್ಲದಿದ್ದರೆ ಸಾಹಸಸಿಂಹನ ಅಸಮರ್ಥ ಸಂಭಂದಿಗಳು ಕಾಡನ್ನು ಕಿತ್ತು ತಿನ್ನುವಂತಾಗುತಿದ್ದರು.
 
ಸಾಹಸಸಿಂಹ ಕಾಡಿಗೆ ಮರಳಿ ಬರುತ್ತಿರುವ ಸುದ್ದಿ ಎಲ್ಲೆಡೆ ಹರಡಿತು. ವಿಷಯ ಕೇಳಿದ ಜಾಂಬವಂತ ಬಹಳ ಸಂತೋಷಗೊಂಡನು. “ಸಾಹಸಸಿಂಹನ ಅದ್ಧೂರಿ ಸುಸ್ವಾಗತಕ್ಕೆ ಅಣಿ ಮಾಡಿ. ಕಾಡಿನಲ್ಲೆಲ್ಲ ನಾದಸ್ವರ ಹೊಮ್ಮಲಿ.ವಾದ್ಯಗಳ ಝೇಂಕಾರ ಮೊಳಗಲಿ!” ಎಂದು ಆಜ್ಞೆಯಿತ್ತನು. ಕಾಡಿನ ಮೂಲೆ ಮೂಲೆಯಿಂದ ನೃತ್ಯಪ್ರದರ್ಶನಕ್ಕೆ ರಮಣೀಯ ನವಿಲುಗಳು, ವಸ್ತ್ರಾಲಂಕಾರ ಪ್ರದರ್ಶನಕ್ಕೆ ಸುಂದರ ಜಿಂಕೆಗಳು, ಡೊಳ್ಳು ಕುಣಿತಕ್ಕೆ ಅನುಭವಿ ಕೋತಿಗಳನ್ನು ಕರೆಸಲಾಯಿತು.
 
ಕೊನೆಗೂ ಆಗಮಿಸಿದ ಸಾಹಸಿಂಹನ ಸ್ವಾಗತ ಪ್ರಾಣಿಗಳ ಚಪ್ಪಾಳೆಗಳಿಂದಾಯಿತು. ಕಾಡನ್ನುದ್ದೇಶಿಸಿ ಜಾಂಬವಂತ ಹೀಗೆಂದನು “ಮಹಾಪ್ರಜೆಗಳೇ! ಸಾಹಸಸಿಂಹನ ಆಗಮನದಿಂದ ಕಾಡಿನ ಶಕ್ತಿ ಇಮ್ಮಡಿಸಿದೆ. ಇಂದಿನಿಂದ ಕಾಡಿನ ಉಸ್ತುವಾರಿ ನನ್ನಂತಹ ಮುದುಕ ನೋಡಿಕೊಳ್ಳಬೇಕಾಗಿಲ್ಲ. ನಿಮ್ಮನ್ನೆಲ್ಲ ಮುನ್ನಡೆಸಲು, ನಿಮ್ಮ ರಾಜ ಹಿಂದಿರುಗಿದ್ದಾನೆ. ಇಗೋ, ಸಾಹಸಸಿಂಹನೇ ಇನ್ನು ಮುಂದೆ ಕಾಡಿನ ರಾಜ!”. ಜಾಂಬವಂತನ ಘೋಷಣೆ ಕೇಳುತ್ತಿದ್ದಂತೆ ಕಾಡುಪ್ರಾಣಿಗಳೆಲ್ಲ ಹುಚ್ಚೆದ್ದು ಕುಣಿಯತೊಡಗಿದವು. “ಸಾಹಸಸಿಂಹನಿಗೆ ಜೈ! ಸಾಹಸಸಿಂಹನಿಗೆ ಜೈ!” ಎಂಬ ಕೂಗು ಕಾಡನ್ನು ಆವರಿಸಿತು. ಆದರೆ ಸಾಹಸಸಿಂಹನ ಸಂಭಂದಿಗಳು ಮಾತ್ರ ಮೂಲೆಯಲ್ಲಿ ಗೊಣಗುತ್ತಾ ನಿಂತಿದ್ದರು. ಇಷ್ಟೆಲ್ಲ ನಡೆಯುತ್ತಿದ್ದರು ಸಾಹಸಸಿಂಹ ಮಾತ್ರ ಮಂತ್ರಮುಗ್ಧನಾದವನಂತೆ ಒಂದೇ ಕಡೆ ದಿಟ್ಟಿಸಿ ನೋಡುತಿದ್ದ. ಆಶ್ಚರ್ಯಗೊಂಡ ಜಾಂಬವಂತ ಸಾಹಸಸಿಂಹನೆಡೆ ನೋಡಿದ. ಸಾಹಸಸಿಂಹನ ದೃಷ್ಟಿ ಹಾಗು ಗಮನ ಸೆಳೆದಿದ್ದು ವಸ್ತ್ರಾಲಂಕಾರ ಪ್ರದರ್ಶನಕ್ಕೆ ಬಂದ ಅಂದದ ಒಯ್ಯಾರಿ, ಸುಂದರ ಬೆಡಗಿ ಜಿಂಕೆ ಚಿಣ್ಮಿಣಿ! ಚಿಣ್ಮಿಣಿಯ ಸೌಂದರ್ಯಕ್ಕವನು ಸಂಪೂರ್ಣವಾಗಿ ಮರುಳಾಗಿದ್ದನು.

ವಾರಗಳು ಕಳೆದರು ರಾಜ್ಯಭಾರ ನಡೆಸದೆ, ಸಾಹಸಸಿಂಹ ಚಿಣ್ಮಿಣಿಯ ಹಿಂದೆ ತಿರುಗಲಾರಂಭಿಸಿದ. ದಾರಿತಪ್ಪುತಿದ್ದ ಸಾಹಸಸಿಂಹನನ್ನು ತಿದ್ದಲು ಜಾಂಬವಂತ ಯತ್ನಿಸಿದ “ಸಾಹಸಸಿಂಹ! ರಾಜವಿದ್ಯೆ ಕಲಿಯುವುದ ಬಿಟ್ಟು ನಿನ್ನ ಮನಸ್ಸು ಬೇರೆಲ್ಲೋ ಇದ್ದಂತಿದೆ.” ಸಾಹಸಸಿಂಹ ತೊದಲಿದನು “ಗುರು ಜಾಂಬವಂತರೇ! ಅದು..”. ಜಾಂಬವಂತ ಪ್ರತ್ಯುತ್ತರವಿತ್ತ “ನನೆಗೆ ಎಲ್ಲಾ ತಿಳಿದಿದೆ. ಚಿಣ್ಮಿಣಿಯ ಮೋಹದ ಬಲೆಯಲ್ಲಿ ಸಿಲುಕಿರುವೆಯಲ್ಲವೇ? ಆದರೆ ಈ ಸಮಯದಲ್ಲಿ ಶೃಂಗಾರ ಪೂಜೆಗಿಂತ ಮುಖ್ಯವಾದ ಕೆಲಸ ರಾಜಾಡಳಿತ!” ಇದಕ್ಕೆ ಸಾಹಸಸಿಂಹ “ಗುರುವರ್ಯ! ನಾನು ಶೃಂಗಾರ ವ್ಯಸನಿಯಾಗಿಲ್ಲ. ಪವಿತ್ರ ಪ್ರೇಮಿಯಾಗಿದ್ದೇನೆ. ಇದು ಕಾಮವಲ್ಲ, ಪರಿಶುದ್ಧ ಪ್ರೀತಿ. ರಾಜ ವಿದ್ಯೆಯಲ್ಲೇನಿದೆ? ಕಾಳಗ, ಯುದ್ಧ, ಕ್ರೌರ್ಯ. ಇವೆಲ್ಲವಕ್ಕಿಂತ ಪ್ರೇಮ ಮಿಗಿಲಲ್ಲವೇ?” ಎಂದು ತಿರುಗುತ್ತರ ಕೊಟ್ಟನು. ಜಾಂಬವಂತ ಎಷ್ಟೇ ಹೇಳಿದರು, ವೇದಾಂತಿಯಂತೆ ಮಾತನಾಡುತ್ತ ನಾನು ಚಿಣ್ಮಿಣಿಯನ್ನು ವಿವಾಹವಾದ ಮೇಲೆ ಬೇರೆ ಕಾರ್ಯಗಳು ಎಂದು ಪಟ್ಟು ಹಿಡಿದ. “ಒಂದು ಸಿಂಹ ಜಿಂಕೆಯ ಮದುವೇ ಸಾಧ್ಯವೇ? ಕಾಡು ಒಪ್ಪುವುದೇ?” ಎಂಬ ಪ್ರೆಶ್ನೆಗೆ “ಪ್ರೀತಿ ಕುರುಡು! ನನಗ್ಯಾರ ಅಭಿಪ್ರಾಯ ಬೇಕಿಲ್ಲ!” ಎಂದು ಬೇಜವಾಬ್ದಾರಿ ಮಾತುಗಳನ್ನಾಡಿದ.
 
ಇನ್ನು ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಜಾಂಬವಂತ ವಿವಾಹ ಏರ್ಪಡಿಸಲು ಮುಂದಾಗಿ, ಚಿಣ್ಮಿಣಿಯ ತಂದೆಯ ಹತ್ತಿರ ಸಂಭಂದ ಕೋರಿದ.ಸಿಂಹವಂಶದಿಂದ ಸಂಭದದ ಮಾತು ಕೇಳಿ ತಂದೆಗೆ ಮಿಂಚು ಬಡಿದಂತಾಯಿತು. ಆದರೆ ಜಾಂಬವಂತನ ಭರವಸೆಯ ಮಾತುಗಳು, ರಾಜಮನೆತನದ ಸಂಭಂದ ಬೆಳೆಸುವ ಆಸೆಗಳಿಂದ ಮಗಳ ಅಭಿಪ್ರಾಯವನ್ನೂ ಕೇಳದೆ ಮದುವೆಗೆ ಒಪ್ಪಿಕೊಂಡನು. ಚಿಣ್ಮಿಣಿಯ ಹೃದಯದಲ್ಲಿ ಹರಿಣಗಳ ರಾಜ ಕೌಸ್ತುಭ ನೆಲೆಸಿದ್ದ. ಆದರೆ ತಂದೆಯ ಮಾತನ್ನು ಎಂದು ಮೀರದ ಆದರ್ಶ ಮಗಳವಳು! ಮನದಾಸೆಯನ್ನು ಬದಿಗೊತ್ತಿ ತ್ಯಾಗಮಯಿಯಾಗಿ ವಿವಾಹಕ್ಕೆ ಒಪ್ಪಿಕೊಂಡಳು. ನೋಡ ನೋಡುತ್ತಿದ್ದಂತೆಯೆ ಸಾಹಸಸಿಂಹ-ಚಿಣ್ಮಿಣಿಯ ಅಲೌಕಿಕವೆನಿಸುವ ಮದುವೆ ನಡೆದೇ ಹೋಯಿತು. ಸಾಹಸಸಿಂಹನ ಗುಹೆಯಲ್ಲೇ ಮೊದಲನೇ ರಾತ್ರಿಯೂ ಏರ್ಪಾಡಾಯಿತು. ಭಯದಿಂದ ನಡುಗುತ್ತ, ಕಸಿಬಿಸಿ ಮನಸಿನ್ನಿಂದ ಚಿಣ್ಮಿಣಿ ಗುಹೆಯಲ್ಲಿ ಕಾದು ಕುಳಿತಳು. 
 
ಸಾಹಸಸಿಂಹ ಪ್ರಸ್ತಕ್ಕೆ ಸಿದ್ಧನಾಗಿ ಗುಹೆಯೆಡೆಗೆ ಓಡೋಡಿ ಬರುತ್ತಿದ್ದಾಗ ಬಳಲಿ ಬಾಯಾರಿಕೆ ನೀಗಿಸಲು ಕೆರೆಯ ಬಳಿ ಹೋದನು. ನೀರು ಕುಡಿಯುತ್ತಿದ್ದಾಗ ಕೆರೆಯಲ್ಲಿ ಭಯಾನಕ ದೃಶ್ಯವೊಂದನ್ನು ಕಂಡು ಹಿಂದಕ್ಕೆ ಸರಿದನು. ನೀರಿನಲ್ಲಿ ಯಾವುದೋ ಕ್ರೂರ ಮೃಗವನ್ನು ಕಂಡಂತೆ ಭಾಸವಾಯಿತು. ಯಾರಿರಬಹುದೆಂದು ಭಯದಿಂದ ಕೆರೆಯಲ್ಲಿ ಮತ್ತೆ ಇಣುಕಿದನು. ಅವನಿಗೆ ನೀರಿನಲ್ಲಿ ಕಂಡಿದ್ದು ರೊಚ್ಚಿಗೆದ್ದು ಭಯಂಕರವಾಗಿ ಘರ್ಜಿಸುತ್ತಿದ್ದ ಉಗ್ರ ಸಿಂಹ. ಗಾಬರಿಯಿಂದ ನಡುಗುತ್ತ ಸಾಹಸಸಿಂಹ “ಯಾರು ನೀನು?” ಎಂದು ನೀರಿನಲ್ಲಿದ್ದ ಸಿಂಹವನ್ನು ಕೇಳಿದನು. ಅವನ ಪ್ರೆಶ್ನೆಗೆ “ಮೂರ್ಖ! ನಾನು ನೀನೇ! ನಿನ್ನ ಪ್ರತಿಬಿಂಬ!” ಎಂಬ ಉತ್ತರ ಬಂತು. ಆಶ್ಚರ್ಯಗೊಂಡ ಸಾಹಸಸಿಂಹ “ಸುಳ್ಳು! ನೀನು ನನ್ನ ಪ್ರತಿಬಿಂಬವಾಗಿರಲು ಸಾಧ್ಯವಿಲ್ಲ. ಆಶ್ರಮದಲ್ಲಿ ಬೆಳೆದ ಸೌಮ್ಯ ಸಾತ್ವಿಕ ಸಿಂಹ ನಾನು. ಕೋಪವೆಂದರೇನೆಂದೇ ನಾನರಿಯೆ! ನೀನು ನೋಡಿದರೆ ಕ್ರೋಧದಲ್ಲಿ ದಗದಗನೆ ಉರಿಯುತ್ತಿರುವೆ.” ಉತ್ತರವಾಗಿ ಪ್ರತಿಬಿಂಬ “ಮಂಕುಮತಿಯೇ! ಭ್ರಮೆಯಲ್ಲಿ ಮುಳುಗಿರುವೆ!ನೀನೊಬ್ಬ ಕ್ರೋಧಭರಿತ ಸಿಂಹವೇ. ಅದೇ ಸತ್ಯ! ” ಎಂದಿತು. ವಿಚಲಿತಗೊಂಡ ಸಾಹಸಸಿಂಹ “ಇಲ್ಲ! ಇಲ್ಲ!” ಎಂದು ಅರುಚಿದನು. ಪ್ರತಿಬಿಂಬ ನಿಲ್ಲಿಸಲಿಲ್ಲ “ಸಿಂಹದ ಕೆಲಸ ಜಿಂಕೆಯ ಬೇಟೆ! ನಿನ್ನ ಹೆಂಡತಿ ಚಿಣ್ಮಿಣಿಯನ್ನು ತಿಂದುಬಿಡು. ವರ್ಷಗಳ ಹಸಿವು ತೀರಿಸಿಕೋ!”. ತನ್ನ ಪ್ರತಿಬಿಂಬದ ಈ ಕಠೋರ ಮಾತುಗಳನ್ನು ಕೇಳಲಾಗದೆ ಸಾಹಸಸಿಂಹ ಅಲ್ಲಿಂದ ಓಡಿದನು. 
 
ಗುಹೆಯತ್ತ ಸಾಹಸಸಿಂಹ ಬರಲೇಯಿಲ್ಲ. ಹೀಗಾಗಿ ಚಿಣ್ಮಿಣಿಯ ನಿರೀಕ್ಷೆಗೆ ಕೊನೆಯೇ ಇಲ್ಲದಂತಾಯಿತು.
 
ಬಹಳಷ್ಟು ದಿನಗಳು ಕಳೆದವು. ಆದರೆ “ನಿನ್ನ ಹೆಂಡತಿಯನ್ನು ತಿಂದುಬಿಡು!” ಎಂಬ ಪ್ರತಿಬಿಂಬದ ಮಾತು ಸಾಹಸಸಿಂಹನ ತಲೆಯಲ್ಲೇ ಸುರುಳಿ ಹೊಡೆಯುತ್ತಲೇ ಇತ್ತು. ಎಷ್ಟು ಪ್ರಯತ್ನ ಪಟ್ಟರು “ನೀನೊಬ್ಬ ಕ್ರೂರ ಮಾಂಸಾಹಾರಿ ಸಿಂಹ!” ಎನ್ನುವ ಯೋಚನೆ ಅವನನ್ನು ಬಿಡಲಿಲ್ಲ. ಯೋಚನೆಗಳೊಡನೆ ಕಾಳಗ ನಡೆಸಿ, ಸುಸ್ತಾಗಿ, ಸಾಹಸಸಿಂಹ ತನ್ನ ಮಾನಸಿಕ ಸಮತೋಲನೆಯನ್ನೇ ಕಳೆದುಕೊಂಡು ಅಡ್ಡಾದಿಡ್ಡಿಯಾಗಿ ಕಾಡಿನಲ್ಲಿ ಭ್ರಮಿಸತೊಡಗಿದನು. 
 
ಗಂಡನಿಗಾಗಿ ಕಾದು ಕಾದು ನೊಂದ ಚಿಣ್ಮಿಣಿಯನ್ನು ಸಾಹಸಸಿಂಹನ ಪರಿವಾರದವರು ಅಣುಕಲಾರಂಭಿಸಿದರು-“ಪೆದ್ದಿ! ಒಂದು ಸಾಧಾರಣ ಜಿಂಕೆಯಾಗಿ ಸಿಂಹವನ್ನು ವರಿಸಲು ಹೋದರೆ, ಹೀಗೆ ಆಗುವುದು!”.ಆದರು ಪತಿಯೇ ಪರಮಾತ್ಮನೆಂದುಕೊಂಡು ಜೀವನ ತಳ್ಳಿದಳು. ಇವಳ ಸ್ಥಿತಿಯನ್ನು ಕಂಡ ಜಾಂಬವಂತನಿಗೆ  ಕರುಣೆ ಉಕ್ಕಿತು. 
 
ಹೀಗೊಂದು ದಿನ ಚಿಣ್ಮಿಣಿ ನೆಲೆಸಿದ್ದ ಗುಹೆಯ ಬಳಿ ಅವಳ ವಿವಾಹ ಪೂರ್ವ ಪ್ರಿಯತಮ ಕೌಸ್ತುಭ ಬಂದು-“ಚಿಣ್ಮಿಣಿ! ತಂದೆಯ ಆಸೆಗೋಸ್ಕರ ನಿನ್ನ ಜೇವನವನ್ನೇ ತ್ಯಾಗ ಮಾಡಿದೆ. ನೀನು ಈಗಲೂ ನನ್ನನ್ನೇ ಪ್ರೀತಿಸುತ್ತಿರುವೆಯೆಂದು ನನಗೆ ತಿಳಿದಿದೆ. ಇನ್ನು ಕಾಲ ಮಿಂಚಿಲ್ಲ. ನನ್ನೊಡನೆ ಬಾ ಪ್ರಿಯೇ!” ಎಂದನು. ಇದಕ್ಕೆ ಚಿಣ್ಮಿಣಿ “ನಿಲ್ಲಿಸು! ಒಬ್ಬ ವಿವಾಹಿತ ಸ್ತ್ರೀಯೊಡನೆ ಹೀಗೆ ಮಾತನಾಡಬಾರದು. ವಿವಾಹದ ಪೂರ್ವ ನಿನ್ನನ್ನು ಬಯಸಿದ್ದು ನಿಜ, ಆದರೆ ಈಗ ನನ್ನ ಪತಿಯೇ ನನ್ನ ಸರ್ವಸ್ವ! ಹೊರಟುಬಿಡು!” ಎಂದು ಕೌಸ್ತುಭನನ್ನು ಓಡಿಸಿಬಿಟ್ಟಳು. ಇವರ ಸಂಭಾಷಣೆಯನ್ನು ಅಲ್ಲೇ ಆಲಿಸುತಿದ್ದ ಜಾಂಬವಂತ ಚಿಣ್ಮಿಣಿಗೆ ಹೀಗೆಂದನು “ಮಗಳೇ! ಮದುವೆಯಾದಾಗಲಿಂದ ಕೇವಲ ದುಃಖವನ್ನೇ ಕಂಡಿರುವೆ. ಆತುರದಲ್ಲಿ ನಾನು ನಿನ್ನ ತಂದೆ ದುಡುಕಿದೆವು. ನಿನ್ನ ಪ್ರೇಮವನ್ನು ಲೆಕ್ಕಿಸದೆ ನಿರ್ಧಾರ ತೆಗೆದುಕೊಂಡೆವು. ಈಗ ನೋಡಿದರೆ ಗಂಡನಿಲ್ಲದ ಜೀವನ! ಇದು ಅನ್ಯಾಯ! ನಿನ್ನ ಪಾತಿವ್ರತ್ಯದ ಮೇಲೆ ನನಗೆ ಸಂದೇಹವಿಲ್ಲ. ಆದರೆ ಸಾಹಸಸಿಂಹ ಮತ್ತೆ ಬರುವ ಚಿಹ್ನೆಗಳು ಕಂಡುಬರುತ್ತಿಲ್ಲ.ಅವನಿಂದ ನಿನ್ನ ಜೀವನವೂ ಹಾಳಾಗುವುದನ್ನು ನಾ ನೋಡಲಾರೆ! ದಯವಿಟ್ಟು ನಿನ್ನ ಪ್ರೀತಿಯ ಬಳಿಗೆ ಹೋಗು!”. ಇದಕ್ಕೇನೂ ಉತ್ತರ ಕೊಡದೆ ಅಳುತ್ತ ಚಿಣ್ಮಿಣಿ ಗುಹೆಯೊಳಗೆ ಓಡಿದಳು. 
 
ತನ್ನ “ಕೆಟ್ಟ” ಯೋಚನೆಗಳ ಮೇಲೆ ನಿಯಂತ್ರಣ ಸಿಗದ ಸಾಹಸಸಿಂಹ, ಕೆರೆಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಾಗ,”ನಿಲ್ಲು ಸಾಹಸಸಿಂಹ! ಇದೆಂತ ಪಾಪವೆಸಗಲು ಹೊರಟಿರುವೆ?” ಎಂದ ಬುದ್ಧನ ಧ್ವನಿ ಕೇಳಿಬಂತು. ತನ್ನ ಪರಮ ಗುರುವನ್ನು ಕಂಡು ಅಳುತ್ತ ಸಾಹಸಸಿಂಹ ಹೀಗೆಂದನು “ನಾನೊಬ್ಬ ಕ್ರೂರಿ! ನನ್ನ ಮನಸ್ಸು ನನ್ನ ಹೆಂಡತಿಯನ್ನೇ ತಿಂದುಬಿಡಲು ಪ್ರೇರೇಪಿಸುತ್ತಿದೆ. ನಾನೇನು ಮಾಡಲಿ ಪ್ರಭು!”. “ಚಿಣ್ಮಿಣಿಯನ್ನು ತಿಂದುಬಿಡು!” ಎಂದನು ಬುದ್ಧ. ಈ ಘೋರ ಪ್ರತ್ಯುತ್ತರ ಕೇಳಿ ಸಾಹಸಸಿಂಹ ಚಕಿತಗೊಂಡನು-“ಇದೇನು ಗುರುವರ್ಯ! ನನ್ನ ಗಾಯಕ್ಕೆ ಉಪ್ಪು ಸುರಿಯುತ್ತಿದ್ದೀರಾ?”. ಆಗ ಬುದ್ಧ ಸಮಾಧಾನಕರವಾಗಿ ಜೇವನ ಸ್ವಾರಸ್ಯವನ್ನು ವರ್ಣಿಸಿದನು “ಕೇಳು ಸಾಹಸಸಿಂಹ! ನಿನಗೆ ಬರುತ್ತಿರುವ ಯೋಚನೆಗಳು ಕೆಟ್ಟದಲ್ಲ. ಅವು ಸಹಜ ಹಾಗು ಪ್ರಾಕೃತಿಕ. ತಲೆಮಾರುಗಳಿಂದ ಜಿಂಕೆಗಳನ್ನು ಬೇಟೆಯಾಡುತ್ತಾ ಬಂದಿರುವ ಪೂರ್ವಜರ ರಕ್ತವೇ ನಿನ್ನಲ್ಲಿರುವುದು. ನೀನು ಆಶ್ರಮದಲ್ಲಿ ಬೆಳೆದುದರಿಂದ ಈ ಭಾವನೆಗಳು ಕೆಲವು ದಿನ ಮಸುಕಾಗಿತ್ತು. ಆದರೆ ನಿನ್ನಿಂದ ನೀನು ಎಷ್ಟು ಓಡಲು ಸಾಧ್ಯ? ಪ್ರೀತಿಯಲ್ಲಿ ಸಿಲುಕಿ ನಿನ್ನ ಕರ್ತವ್ಯವನ್ನು ಕೂಡ ಮರೆತೆರುವೆ. ನಿನ್ನೀ ವರ್ತನೆಯಿಂದ ಪ್ರಜೆಗಳಿಗೂ ನಿನ್ಮೇಲಿನ ನಂಬಿಕೆ ಕಡಿಮೆಯಾಗಿದೆ. ಅವರಿಗೆ ಬೇಕಿರುವುದು ಅಬ್ಬರಿಸುವ ಸಾಹಸಸಿಂಹ! ವೇದಗಳನ್ನಾಡುವ, ಅನುರಾಗದಲ್ಲಿರುವ ಮೋಹಸಿಂಹನಲ್ಲ. ನಿನ್ನ ತಂದೆಯನ್ನು ಕೊಂದ ಪ್ರತಾಪಸಿಂಹನು ಈಗಲೂ ಕಾಡುಪ್ರಾಣಿಗಳಿಗೆ ದುಃಸ್ವಪ್ನವಾಗಿದ್ದಾನೆ. ಅವನ ಮಣಿಸಿ ತಂದೆಯ ಆತ್ಮಕ್ಕೆ ಶಾಂತಿ ತರುವ ಯೋಚನೆಯೇ ಇಲ್ಲ ನಿನಗೆ. ಪ್ರಕೃತಿ ನಿಯಮವನ್ನು ಸ್ವೀಕರಿಸಿ ನಿನ್ನ ಆಂತರಿಕ ಭಾವನೆಗಳೊಡನೆ ಸೆಣೆಸಾಡದೇ ಒಪ್ಪಿಕೊಂಡಾಗ ಮಾತ್ರ ಮನಃಶಾಂತಿ ಸಾಧ್ಯ. ನನ್ನ ಮಾತು ಕೇಳು! ನಿನ್ನ ಗುಹೆಗೆ ಮರಳಿ ಹೋಗು.” ದಿಗ್ಬ್ರಾಂತಿಯಾದ ಸಾಹಸಸಿಂಹ-“ನಾನು ಹೋಗುವುದಿಲ್ಲ! ಹೋದರೆ ನನ್ನ ಹೆಂಡತಿಯನ್ನೇ ತಿಂದುಬಿಡುವೆ!” ಎಂದನು. “ಸಾಹಸಸಿಂಹ! ನಿನ್ನ ಭಯವನ್ನು ಎದುರಿಸಿ. ಗುಹೆಗೆ ತೆರಳು. ಏನು ಅಹಿತಕರ ಘಟನೆ ನಡೆಯುವುದಿಲ್ಲ. ನನ್ನನ್ನು ನಂಬು!” ಎಂದು ಬುದ್ಧ ಸಾಹಸಸಿಂಹನನ್ನು ಬಲವಂತವಾಗಿ ಕಳುಹಿಸಿಕೊಟ್ಟನು. 
 
ಹೆದರುತ್ತ ಗುಹೆಯ ಬಳಿಗೆ ಸಾಹಸಸಿಂಹ ಬಂದನು. ಗುಹೆಯಲ್ಲಿ ಇಣುಕಿ ನೋಡಿದರೆ ಚಿಣ್ಮಿಣಿಯ ಸದ್ದೇ ಇಲ್ಲ. ಸುತ್ತ-ಮುತ್ತ ಎಲ್ಲಿ ಹುಡುಕಿದರು ಅವಳು ಸಿಗಲಿಲ್ಲ. ಕಡೆಗೆ ಜಾಂಬವಂತ ಸಿಕ್ಕಿ ನಡೆದ ಘಟನೆಯನ್ನು ವಿವರಿಸಿದನು-“ಚಿಣ್ಮಿಣಿಯನ್ನು ಮರೆತುಬಿಡು! ಎಷ್ಟು ದಿನಗಳು ನಿನ್ನ ದಾರಿ ಹುಡುಕಿಯಾಳು? ಬೇಸತ್ತ ಅವಳಿಗೆ ಅವಳ ಪ್ರಥಮ ಪ್ರೇಮಿ ಕೌಸ್ತುಭನೊಡನೆ ಹೋಗಲು ನಾನೇ ಸಲಹೆ ನೀಡಿದೆ. ನನ್ನ ಸಲಹೆಯನ್ನು ಆಲಿಸಿದಳು”. ಸಾಹಸಸಿಂಹನಿಗೆ ಜಾಂಬವಂತನ ಮಾತುಗಳನ್ನು ಕೇಳಿ ಅಳಬೇಕೊ ನಗಬೇಕೊ ತಿಳಿಯಲಿಲ್ಲ. ಮಿಶ್ರ ಭಾವನೆಗಳಿಂದ ಅವನ ಮನಸ್ಸು ಛಿದ್ರವಾಯಿತು. ಒಮ್ಮೆಲೆ ಬುದ್ಧನಲ್ಲಿಗೆ ಓಡಿ ಹೋಗಿ-“ಗುರುಗಳೇ! ಚಿಣ್ಮಿಣಿ ನನ್ನನ್ನು ಅಗಲಿದ್ದಾಳೆ!” ಎಂದನು. ಸಕಲ ಜ್ಞಾನಿಯಾದ ಬುದ್ಧ ಕೇವಲ ಮುಗುಳ್ನಕ್ಕನು. “ಪ್ರೀತಿ-ಪ್ರೇಮ ಎಂದು ನಾನು ಹೆಣಗಾಡಿದೆ. ಕಡೆಗೆ ಚಿಣ್ಮಿಣಿ ಕೂಡ ಪ್ರಕೃತಿ ನಿಯಮದಂತೆ ಒಬ್ಬ ಜಿಂಕೆಯನ್ನೇ ಆರಿಸಿಕೊಂಡಳು! ನೀವು ಹೇಳಿದ ತರ್ಕ ನನಗೀಗ ಅರಿವಾಗಿದೆ. ಮೋಹದ ತೆರೆ ಕಳಚಿದೆ.” ಎಂದನು. “ನನ್ನನು ಹರಿಸಿ ಗುರುವರ್ಯ! ಇನ್ನು ಮುಂದೆ ಕರ್ತವ್ಯ ಪಾಲನೆಯೇ ನನ್ನ ಗುರಿ! ಪ್ರಜೆಗಳ ರಕ್ಷಣೆಯೇ ನನ್ನ ಧ್ಯೇಯ! ಆ ಪ್ರತಾಪಸಿಂಹನ ಹುಟ್ಟಡಗಿಸುವೆ!” ಎಂದು ಬುದ್ಧನ ಆಶೀರ್ವಾದ ಸ್ವೀಕರಿಸಿ ಭೂಕಂಪನವಾದಂತೆ ಘರ್ಜಿಸಿ ಕಾಡಿನೊಳಗೆ ಧಾವಿಸಿದನು. ಸಾಹಸಸಿಂಹನ ವೀರಾವೇಶದ ಘರ್ಜನೆಯನ್ನು ಕೇಳಿದ ಜಾಂಬವಂತ ಇದು ಕಾಡಿನ ಅಭ್ಯುದಯದ ಮುನ್ನುಡಿಯ ಶಂಖನಾದ ಎಂದರಿತು ನಿಟ್ಟುಸಿರು ಬಿಟ್ಟನು.

 

Advertisements

6 thoughts on “ನೀನು ನೀನಾಗಿರು!

  1. ಪವನ್ ಕಥೆ ಚನ್ನಾಗಿದೆ. ಆದರೆ, ಎರಡು, ಮೂರು ಕಡೆ ಕುಣಿತ ದೋಷ ಇದೆ. ಅದನ್ನು ಸಾಧ್ಯವಾದರೆ ತಿದ್ದುಪಡಿ. ೧. ಹಿಮ್ಮಡಿಸಿದೆ ತಪ್ಪು ಅದು ಇಮ್ಮಡಿಸಿದೆ ಆಗ ಬೇಕು. ೨. ನಂನಂತಹ ತಪ್ಪು ನನ್ನಂತಹ ಆಗಬೇಕು. ೩. ನನ್ನನ್ನು ಹರಿಸಿ ಗುರುವರ್ಯ ಅಂತ ಇದೆ, ಅದು ನನ್ನನ್ನು ಹರಸಿ ಅಂತ ಆಗಬೇಕು. ಅಷ್ಟು ಬಿಟ್ಟರೆ ಕಥೆ ಚನ್ನಾಗಿದೆ. ಅಮೇರಿಕದಲ್ಲಿದ್ದು ಕನ್ನಡ ಮರೆತಿಲ್ಲವಲ್ಲ, ಅದಕ್ಕೆ ಖುಷಿ ಆಯ್ತು. ಹೀಗೇ ಮುಂದುವರೆದು.ಶುಭವಾಗಲಿ.

  2. Buddha saying ““ಸಾಹಸಸಿಂಹ! ನೀನೀಗ ಒಂದು ಶಕ್ತಿಶಾಲಿ, ಪ್ರಾಯದ ಸಿಂಹ. ನೀನು ಆಶ್ರಮದಲ್ಲಿ ಸಾತ್ವಿಕ ಜೀವನ ನಡೆಸಿಕೊಂಡಿರುವುದು ತರವಲ್ಲ. ನಮ್ಮ ಆಶ್ರಮಕ್ಕೆ ಬಂದ ಪುಟ್ಟ ಮರಿಯಲ್ಲ. ನಿನಗೆ ರಕ್ಷಣೆಯ ಅವಶ್ಯಕತೆ ಈಗಿಲ್ಲ. ಹೇಳುವುದಾದರೆ ಕಾಡಿನ ಪ್ರಾಣಿಗಳಿಗೆ ನಿನ್ನಂತ ರಾಜನ ಸಂರಕ್ಷಣೆ ಬೇಕಿದೆ. .ಕಾಡಿಗೆ ಹಿಂದಿರುಗು! ಕರ್ತವ್ಯ ಪಾಲನೆ ಮಾಡು!” does not make sense to me.
    He was supposed to be a king, he left his duties and came, he advising someone else to do it is not right.

  3. Minor spelling errors to correct ತಿಂಡಿಬಿಡು (in 2 places) -> ತಿಂದು ಬಿಡು.

  4. ಅಕ್ಕ ನೀವು ಹೇಳಿದ ಎಲ್ಲ ತಿದ್ದುಪಡಿ ಮಾಡಿದ್ದೇನೆ. ಕಥೆಯನ್ನ ಓದಿ ಸಲಹೆಗಳನ್ನ ನೀಡಿದಕ್ಕೆ ತುಂಬ ಥ್ಯಾಂಕ್ಸ್ 🙂

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s